ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡತನವನ್ನು ಹಳಿಯದ ಕಲಾವಿದ - ಕುಂಞಿಹಿತ್ಲು ಸೂರ್ಯಣ್ಣ

ಲೇಖಕರು :
ನಾ.ಕಾರ೦ತ, ಪೆರಾಜೆ
ಗುರುವಾರ, ಜೂನ್ 25 , 2015

ಬೆಳ್ಳಾರೆ (ದ.ಕ.) ಪೇಟೆಯ ಮಧ್ಯೆ ಸುಳ್ಯಕ್ಕೆ ತಿರುಗುವ ರಸ್ತೆಯ ಅಂಚಿನಲ್ಲೊಂದು ಮನೆಯಿತ್ತು. ಅದಕ್ಕೆ ತಾಗಿಕೊಂಡು ಚಿತ್ರಕ್ಕೆ ಕಟ್ಟು ಹಾಕುವ ಅಂಗಡಿ. ಇಪ್ಪತ್ತೈದು ವರುಷ ಈ ಮನೆಯಲ್ಲಿ ಚೆಂಡೆಮದ್ದಳೆಗಳ ಸದ್ದು. ಅಂಗಡಿಯಲ್ಲಿ ದಣಿವು ತರಿಸದ ಯಕ್ಷಗಾನದ ಮಾತುಕತೆ. ಇಷ್ಟು ಚಿತ್ರಣ ಕೊಟ್ಟರೆ ಸಾಕು. ಒಂದು ಕಾಲಘಟ್ಟದ ಸುಳ್ಯ-ಪುತ್ತೂರು ಸರಹದ್ದಿನ ಯಕ್ಷಗಾನದ ಇತಿಹಾಸವೊಂದು ಮಿಂಚುತ್ತದೆ. ಮಿಂಚಿ ತಕ್ಷಣ ಮರೆಯಾಗುತ್ತದೆ. ಯಾಕೆ ಹೇಳಿ? ಇತಿಹಾಸವನ್ನು ಓದಲು ನಮಗೆಲ್ಲಿ ಪುರುಸೊತ್ತು! ಕಾಲದ ಕಥನಕ್ಕೆ ಕಿವಿಯಾಗಬೇಕಾದ ಮನಸ್ಸುಗಳ ಆದ್ರ್ರತೆಯ ತೇವ ಆರಿದೆ!

ಈ ಮನೆಯ ಯಜಮಾನ ಕುಂಞಿಹಿತ್ಲು ಸೂರ್ಯನಾರಾಯಣ ಭಟ್. ಸೂರ್ಯಣ್ಣ ಎಂದೇ ಆಪ್ತನಾಮ. ಇವರಲ್ಲಿ ಉಂಡ ಕಲಾವಿದರೆಷ್ಟೋ? ತಾಳಮದ್ದಳೆ(ಕೂಟ)ಯಲ್ಲಿ ಅರ್ಥ ಹೇಳಿದ, ಹಾಡಿದ, ಚೆಂಡೆ-ಮದ್ದಳೆಗಳನ್ನು ನುಡಿಸಿದ ಕಲಾವಿದರ ಸಂಖ್ಯೆ ಅಗಣಿತ. ಕಾಂಚಾಣ ಸದ್ದು ಮಾಡುವ ಬದುಕು ಇವರದ್ದಾಗಿರಲಿಲ್ಲ. ಸಿಕ್ಕ ಸಂಪಾದನೆಯಲ್ಲಿ ಶ್ರೀಮಂತಿಕೆಯ ಭಾವ. ತಾನು ಉಣ್ಣದಿದ್ದರೂ ತೊಂದರೆಯಿಲ್ಲ, ಕಲಾವಿದರಿಗೆ ಊಟ-ಉಪಾಹಾರವನ್ನು ನೀಡುವಂತಹ ವಿಶಾಲ ಹೃದಯಿ.

ಸೂರ್ಯಣ್ಣನ ಮನೆ ಚಿಕ್ಕದು. ಮನ ದೊಡ್ಡದು. ಚಿಕ್ಕ ವರಾಂಡ, ಅಡುಗೆ ಮನೆ. ತಿಂಗಳಿಗೊಮ್ಮೆ ನಡೆಯುವ ಕೂಟದಲ್ಲಿ ಮನೆಮಂದಿ ಎಲ್ಲಾ ಜಾಗರಣೆ. ವರಾಂಡ ತಾಳಮದ್ದಳೆಯ ವೇದಿಕೆಯಾಗಿ ರೂಪಾಂತರವಾಗುತ್ತಿತ್ತು. ವಿದ್ಯುತ್ ಕೈಕೊಟ್ಟಾಗ ಲಾಟೀನು, ಕ್ಯಾಂಡಲ್ ಬೆಳಕು. ಅತಿಥಿಗಳನ್ನು ಆದರಿಸುವ, ಏರು ರಾತ್ರಿಯಲ್ಲೂ ಚಹ-ತಿಂಡಿಗಳನ್ನು ಮಾಡಿ ತಿನ್ನಿಸುವ ಅಮ್ಮನ ಪ್ರೀತಿ ಸೂರ್ಯಣ್ಣನಲ್ಲಿ ಕಂಡಿದ್ದೆ.

ವರುಷಕ್ಕೊಮ್ಮೆ ವಾರ್ಶಿಕೋತ್ಸವ. ಹಿರಿಯರಿಗೆ ಗೌರವ. ಅನುಭವಿ ಕಲಾವಿದರಿಗೆ ಆಹ್ವಾನ. ಆರ್ಥಪೂರ್ಣ ಕಾರ್ಯಕ್ರಮ. ಸುದ್ದಿ ಕೇಳಿ ಬರುವ ಕಲಾವಿದರ ಸಂಖ್ಯೆ ದೊಡ್ಡದಿತ್ತು. ಕಲಾವಿದರ ಅರ್ಹತೆಗೆ ತಕ್ಕಂತೆ ಪಾತ್ರ ಹಂಚುವ ಜಾಣ್ಮೆ. ಯಾರಿಗೂ ನೋವಾಗದಂತೆ ಎಲ್ಲರೊಂದಿಗೆ ಬೆರೆಯುವ ಸುಭಗತನ. ಬಡತನವನ್ನು ಎಂದೂ ಹಳಿಯದ ಧನಿಕ.

ಶ್ರೀ ವಾಣಿಗಣೇಶ ಪ್ರಸಾದಿತ ಯಕ್ಷಗಾನ ಕಲಾವೃಂದ

1976ರಲ್ಲಿ ತಾನು ಸ್ಥಾಪಿಸಿದ 'ಶ್ರೀ ವಾಣಿಗಣೇಶ ಪ್ರಸಾದಿತ ಯಕ್ಷಗಾನ ಕಲಾವೃಂದ'ವನ್ನು ಈ ಎಲ್ಲಾ ಚಟುವಟಿಕೆಗಳ ಮೂಲಕ ಇಪ್ಪತ್ತೈದು ವರುಷ ಮುನ್ನಡೆಸಿದ್ದರು. ಭಾಗವಹಿಸಿದ ಎಲ್ಲರೂ ಸಂಘದ ಸದಸ್ಯರು. ಒಮ್ಮೆ ಕೂಟಕ್ಕೆ ಒಬ್ಬ ಕಲಾವಿದ ಬಂದರೆ ಸಾಕು, ಮತ್ತೆ ಎಂದೂ ಸಂಘದ ನಂಟಿನಿಂದ ತಪ್ಪಿಸಿಕೊಳ್ಳಲಾರದಷ್ಟು ಅಂಟಿನ ಆಪ್ತತೆ.

ಕುಂಞಿಹಿತ್ಲು ಸೂರ್ಯನಾರಾಯಣ ಭಟ್
ಜನನ : 1938
ಜನನ ಸ್ಥಳ : ಬೆಳ್ಳಾರೆ, ಸುಳ್ಯ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
1976ರಲ್ಲಿ '' ಶ್ರೀ ವಾಣಿಗಣೇಶ ಪ್ರಸಾದಿತ ಯಕ್ಷಗಾನ ಕಲಾವೃಂದ'' ವನ್ನು ಕಟ್ಟಿ, ೨೫ ವರ್ಷಗಳ ಕಾಲ ತೆ೦ಕು ತಿಟ್ಟಿನ ಯಕ್ಷಗಾನದಲ್ಲಿಸೇವೆ ಸಲ್ಲಿಸಿದ ಕಲಾವಿದರು. ಸ್ತ್ರೀ ಪಾತ್ರದಿಂದ ರಾಕ್ಷಸ ಅಭಿವ್ಯಕ್ತಿ ತನಕ ಎಲ್ಲವನ್ನೂ ನಿಭಾಯಿಸಬಲ್ಲ ಅನುಭವಿ.

ಕೂಟದಲ್ಲಿ ಸೂರ್ಯಣ್ಣ ಪಾತ್ರವಾದಾಗ ಬದುಕಿನ ಪಾತ್ರತೆಯನ್ನು ಮರೆಯುವಷ್ಟು ತಲ್ಲೀನ. ಸ್ತ್ರೀ ಪಾತ್ರದಿಂದ ರಾಕ್ಷಸ ಅಭಿವ್ಯಕ್ತಿ ತನಕ ಎಲ್ಲವನ್ನೂ ನಿಭಾಯಿಸಬಲ್ಲ ಅನುಭವಿ. ಸುತ್ತೆಲ್ಲಾ ನಡೆಯುವ ಕೂಟಗಳಲ್ಲಿ ಅರ್ಥಧಾರಿಯಾಗಿ ಖಾಯಂ ಆಹ್ವಾನ ಪಡೆಯುವಷ್ಟು ಬೌದ್ಧಿಕತೆ. ಪಾತ್ರದ ಸುತ್ತ ಕಟ್ಟಿಕೊಂಡಿರುವ ವಿಚಾರಗಳಿಗೆ ನ್ಯಾಯ ಸಲ್ಲಿಕೆ. ಸ್ತ್ರೀ ಪಾತ್ರಗಳಿಗೆ ಒಪ್ಪುವ ಕಂಠ.

ಸಾಹಿತ್ಯದಲ್ಲೂ ಸೂರ್ಯನಾರಾಯಣ ಭಟ್ಟರು ಗಟ್ಟಿ. 'ಜಲಜ ಸಖ' ಎನ್ನುವುದು ಕಾವ್ಯನಾಮ. ಒಂದು ಸಾವಿರ ಚೌಪದಿಗಳು, ತುಳುವಿನಲ್ಲಿ ಚೌಪದಿಗಳು, ಕಾದಂಬರಿ, ಮಕ್ಕಳ ಸಾಹಿತ್ಯ, ಯಕ್ಷಗಾನ ಪ್ರಸಂಗ, ನಾಟಕ.. ಕ್ಷೇತ್ರಗಳ ಸಾಹಿತ್ಯ ರಚನೆಯಲ್ಲಿ ಸೋಲದ ಗಟ್ಟಿತನ. ಕೃತಿಗಳು ಕೆಲವೊಂದು ಅಚ್ಚಾಗಿವೆ. ಹಲವು ಸಂಘಸಂಸ್ಥೆಗಳಿಂದ ಸಂಮಾನಿತರು.

ಇಪ್ಪತ್ತೈದು ವರುಷ ಯಕ್ಷಗಾನ ಬಳಿಕ ಬೆಳ್ಳಾರೆಗೆ ವಿದಾಯ

ಇಪ್ಪತ್ತೈದು ವರುಷ ಬದುಕಿನೊಂದಿಗೆ ಯಕ್ಷಗಾನವನ್ನು ಮಿಳಿತಗೊಳಿಸಿದ ಸೂರ್ಯಣ್ಣನ ಬದುಕೇ ಒಂದು ಪಾತ್ರ. ರಂಗದಲ್ಲಿ ಕೆಲವೊಮ್ಮೆ ಪಾತ್ರ ಗೆಲ್ಲುತ್ತದೆ, ಸೋಲುತ್ತದೆ. ಸೋತಾಗ ಮತ್ತೆದ್ದು ಬರುವ ಛಾತಿ ಅದರದು. ಸೂರ್ಯಣ್ಣನ ಬದುಕಿನ ಪಾತ್ರ ಯಾಕೋ ಅವರಿಗೆ ಗೆಲುವಿನ ಹಾದಿ ತೋರಿಸಿಲ್ಲ. ಬದುಕಿಗಾಗಿ, ಬದುಕಲು ಬೇಕಾಗಿ ಬೆಳ್ಳಾರೆಗೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಚೆಂಡೆಮದ್ದಳೆಗಳಂತೂ ತಮ್ಮ ದನಿಯನ್ನು ಇಳಿಸಿದ್ದುವು. ಕಾಲು ಶತಮಾನಗಳ ಕಾಲ ಪೌರಾಣಿಕ ಪಾತ್ರಗಳು ಮನೆಯೊಳಗೆ ದಿಂಞಣ ಹಾಕಿದ್ದುವಲ್ಲಾ, ಅವುಗಳ ಕಣ್ಣೀರನ್ನು ಎಷ್ಟು ಜನ ಕಂಡರೋ ಗೊತ್ತಿಲ್ಲ.

ಪ್ರಕೃತ ಸೂರ್ಯಣ್ಣ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನೆಲೆ. ಮಡದಿ ಸರಸ್ವತಿ ಇಬ್ಬರು ಪುತ್ರರು. ಈಗಲೂ ಈ ಕುಟುಂಬದಲ್ಲಿ ಅದೇ ಯಕ್ಷಗಾನದ ಗುಂಗು. ಅದೇ ಮಾತುಕತೆ. ಅದೇ ಆಪ್ತತೆ. ಹಳೆಯ ನೆನಪಿನಲ್ಲಿ ಹೊಸತನ್ನು ಹುಡುಕುವ ಹಸಿವು. ಎಪ್ಪತ್ತೇಳರ ದೇಹ ಮಾಗಿದರೂ ಮನಸ್ಸಿನ್ನೂ ಹಸಿಯಾಗಿದೆ. ಪಾತ್ರಗಳು ಮನದಲ್ಲಿ ರಿಂಗಣಿಸುತ್ತಿವೆ. ಲೇಖನಿಯ ಮಸಿ ಆರಿಲ್ಲ. ಯಾವುದೇ ಪುರಸ್ಕಾರ, ಸಹಕಾರಗಳತ್ತ ಯೋಚನೆ ಮಾಡದ ನಿರ್ಲಿಪ್ತ. ಬದುಕನ್ನು ಬಂದ ಹಾಗೆ ಸ್ವೀಕರಿಸುವ ಚಿತ್ತಸ್ಥಿತಿ ಇದೆಯಲ್ಲಾ, ಅದನ್ನು ಎಲ್ಲರಿಂದಲೂ ಅನುಭವಿಸಲು ಸಾಧ್ಯವಿಲ್ಲ ಬಿಡಿ.

ಜೂನ್ 13ರಂದು ಉಪ್ಪಿನಂಗಡಿ ಸನಿಹದ ರಾಮನಗರದಲ್ಲಿ ಸೂರ್ಯಣ್ಣನ ಯಕ್ಷಗಾನದ ಸೇವೆ, ಸಾಹಿತ್ಯ ಆರಾಧನೆಗೆ ಈಗ ಬಾರ್ಯ ವಿಷ್ಣುಮೂರ್ತಿ ಪ್ರತಿಷ್ಠಾನದ ಗೌರವ ಪುರಸ್ಕಾರ ಸಲ್ಲಿಸಲಾಯಿತು.

*********************




ಕೃಪೆ : yakshamatu.blogspot.in

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ